ಏಡನ್: ಅರೇಬಿಯದ ದಕ್ಷಿಣ ತುದಿಯಲ್ಲಿರುವ ರೇವುಪಟ್ಟಣ ಹಾಗೂ ಇದರ ಸುತ್ತಣ ಪ್ರದೇಶ. 26ನೆಯ ನವೆಂಬರ್ 1967ರಿಂದ ಇದು ದಕ್ಷಿಣ ಯೆಮನ್ ಜನತಾ ಗಣರಾಜ್ಯದ ಒಂದು ಭಾಗ. ಬಾಬ್ ಎಲ್ ಮಾಂಡೆಬ್ ಜಲಸಂಧಿಯಿಂದ ಪುರ್ವಕ್ಕೆ 160 ಕಿಮೀ ದೂರಕ್ಕೆ 540 ಮೀ ಎತ್ತರದ ಬಂಡೆಗಾಡಿನ ಏಡನ್ ಪರ್ಯಾಯದ್ವೀಪದ ಪುರ್ವಭಾಗದಲ್ಲಿ ಮೃತ ಅಗ್ನಿಪರ್ವತವೊಂದರ ಕುಸಿದ ಬಾಯಿಯ ಮೇಲೆ ಏಡನ್ ಹಳೆಯ ನಗರ ಇದೆ. ಇದರ ಪಶ್ಚಿಮದಲ್ಲಿ ಏಡನ್ ಕೊಲ್ಲಿಯ ಮೇಲೆ ಹೊಸ ಬಂದರನ್ನೂ ಲಿಟ್ಲ್‌ ಏಡನ್ ಎಂಬ ಬಡಾವಣೆಯನ್ನೂ ಕಾಣಬಹುದು. ಇಲ್ಲೊಂದು ತೈಲಶೋಧನಾಗಾರವೂ ಇದೆ. ವಾಣಿಜ್ಯ ಮಾತ್ರವಲ್ಲದೆ ಆಯಕಟ್ಟಿನ ಪ್ರಾಮುಖ್ಯವೂ ಏಡನಿನ ಬೆಳೆವಣಿಗೆಗೆ ಕಾರಣ. 1853ರಿಂದಲೂ ಸ್ವತಂತ್ರ ಬಂದರೆನಿಸಿಕೊಂಡಿದ್ದು ಕೇಬಲ್ ಮತ್ತು ರೇಡಿಯೊ ಕೇಂದ್ರವಾಗಿರುವ ಏಡನ್ ಸುತ್ತಣ ದೇಶಗಳ ಸರಕು ಸಂಗ್ರಹಿಸಿ ಮತ್ತೆ ಬೇರೆ ದೇಶಗಳಿಗೆ ರವಾನೆ ಮಾಡುವ ಕೇಂದ್ರವಾಗಿದೆ. ಹತ್ತಿ ಜವಳಿ, ಉಪ್ಪು, ಕಾಫಿ, ಚರ್ಮ, ಚಕ್ಕಳ, ಧಾನ್ಯ, ಗೋಂದು, ಹೊಗೆಸೊಪ್ಪು, ಸಕ್ಕರೆ-ಇವು ಈ ರೇವಿನ ಮೂಲಕ ಸಾಗುವ ಮುಖ್ಯ ವಸ್ತುಗಳು. 16 ಕಿಮೀ ದೂರದಲ್ಲಿ ಕಂಡುಹಿಡಿಯಲಾದ ನೆಲದಡಿಯ ಜಲವಸತಿಯಿಂದ ಈಗ ನಗರಕ್ಕೆ ಧಾರಾಳವಾಗಿ ಕುಡಿಯುವ ನೀರು ಒದಗುತ್ತಿದೆ. ಮಳೆಯ ವಾರ್ಷಿಕ ಸರಾಸರಿ 24 ಸೆಂ.ಮೀ. ಅನೇಕ ವರ್ಷಗಳ ಕಾಲ ಇಲ್ಲಿ ಮಳೆಯೇ ಆಗದಿರುವುದು ಉಂಟು. 

ಸೂಯೆಜ್ ಕಾಲುವೆ ತೆರೆದಿರುವಾಗ ಪರ್ಷಿಯನ್ ಖಾರಿಗೂ ಭಾರತವೇ ಮುಂತಾದ ಪೂರ್ವದೇಶಗಳಿಗೂ ಯುರೋಪಿಗೂ ನಡುವೆ ಏಡನ್ ಮುಖ್ಯ ಹಡಗುತಾಣ. ಇಲ್ಲೊಂದು ತೈಲಶೋಧನಾಗಾರವೂ ಇದೆ. ಜನಸಂಖ್ಯೆಯ ಶೇಕಡ 90 ಭಾಗ ಮುಸ್ಲಿಮರು. ಭಾರತೀಯರೂ ಸೋಮಾಲಿಗಳೂ ಐರೋಪ್ಯರೂ ಯೆಹೂದ್ಯರೂ ಇದ್ದಾರೆ.
ಏಡನ್ ನಗರವನ್ನೊಳಗೊಂಡ ಇಡೀ ಏಡನ್ ಪರ್ಯಾಯದ್ವೀಪ ಏಡನ್ ಖಾರಿಯ ಅಂಚಿನಲ್ಲಿ 1200 ಕಿಮೀ ಉದ್ದವಿದ್ದು 160 ಕಿಮೀ ಪರಮಾವಧಿ ಅಗಲ ಹೊಂದಿದೆ. ಇದನ್ನು ಪುರ್ವ-ಪಶ್ವಿಮ ಏಡನ್ಗಳೆಂದು ಎರಡು ಭಾಗ ಮಾಡಬಹುದು. ಪಶ್ಚಿಮ ಏಡನ್ ಚಿಕ್ಕದು. ಒಟ್ಟು ಜನಸಂಖ್ಯೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಇಲ್ಲಿ ವಾಸಿಸುತ್ತಾರೆ. ಹಳ್ಳತಿಟ್ಟುಗಳಿಂದ ಕೂಡಿದ ಈ ನಾಡು ಯೆಮನ್ ಗಡಿಯವರೆಗೆ ಏರುತ್ತ ಹಬ್ಬಿದೆ. ಪುರ್ವ ಏಡನ್ ಹಳ್ಳತಿಟ್ಟುಗಳಿಂದ ಕೂಡಿದ್ದರೂ ಒಟ್ಟಿನಲ್ಲಿ ಇದು ಪಶ್ಚಿಮ ಪ್ರದೇಶಕ್ಕಿಂತ ತಗ್ಗು. ಆಲ್ ಮುಕಲ್ಲಾ ಈ ಭಾಗದ ಮುಖ್ಯ ಬಂದರು. (ಪಿ.ಎಚ್.)

 ಇತಿಹಾಸ 
ಕ್ರಿಸ್ತಶಕೆಗೂ ಹಿಂದಿನ ಕಾಲದಲ್ಲೂ ಏಡನ್ ಯುರೋಪ್ ಮತ್ತು ಪುರ್ವದೇಶಗಳ ಪ್ರಮುಖ ವಾಣಿಜ್ಯ ಕೇಂದ್ರವಾಗಿತ್ತು. ಭಾರತ, ಚೀನ, ಇಂಡೊನೇಷ್ಯ ಮತ್ತು ಆಫ್ರಿಕಗಳಿಂದ ಪದಾರ್ಥಗಳನ್ನು ಏಡನಿನ ಮೂಲಕ ಸಾಗಿಸಲಾಗುತ್ತಿತ್ತೆಂದು ತಿಳಿದು ಬರುತ್ತದೆ. ಕ್ರಿಸ್ತಶಕೆಯ ಆರಂಭದ ಶತಮಾನಗಳಲ್ಲಿ ಭಾರತಕ್ಕೂ ಕೆಂಪುಸಮುದ್ರಕ್ಕೂ ನೇರವಾದ ವ್ಯಾಪಾರ ಬೆಳೆದು ಏಡನಿನ ಪ್ರಾಮುಖ್ಯ ಬಹಳ ಕಡಿಮೆಯಾಗಿತ್ತು. ಆದರೆ ಮಧ್ಯಯುಗದಲ್ಲಿ ಇದು ಮತ್ತೆ ಕುದುರಿಕೊಂಡು ತನ್ನ ಹಿಂದಿನ ಸ್ಥಿತಿಗಿಂತಲೂ ಹೆಚ್ಚು ಅಭಿವೃದ್ಧಿ ಹೊಂದಿತು. 
ಪುರ್ವರಾಷ್ಟ್ರಗಳ ಬಟ್ಟೆ, ಮೆಣಸು ಮುಂತಾದ ಪದಾರ್ಥಗಳಿಗೆ ಏಡನ್ ಪ್ರಮುಖ ವ್ಯಾಪಾರಕೇಂದ್ರವಾಗಿತ್ತು. ಮಾರ್ಕೊಪೋಲೊ ತನ್ನ ಪುರ್ವದೇಶ ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದಾಗ ಹಾದಿಯಲ್ಲಿ ಏಡನನ್ನು ಸಂದರ್ಶಿಸಿದ್ದ. ಆಗ ಇದು ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿತ್ತು. 1513ರಲ್ಲಿ ಪೋರ್ಚುಗೀಸರು ಇದನ್ನು ಆಕ್ರಮಿಸಿಕೊಳ್ಳಲು ಯತ್ನಿಸಿ ವಿಫಲರಾದರು. 1538ರಲ್ಲಿ ಇದು ತುರ್ಕಿಗಳ ವಶವಾಯಿತು. ಒಂದು ಶತಮಾನದ ಅನಂತರ ಯೆಮನಿ ಅರಬ್ಗಳು ಉತ್ತರದಿಂದ ಇದನ್ನಾಕ್ರಮಿಸಿದರು. 1728ರಲ್ಲಿ ಲಹೇಜ್ನ ಸುಲ್ತಾನ ಯೆಮನಿನ ಇಮಾಮರ ವಿರುದ್ಧ ದಂಗೆ ಎದ್ದು ಏಡನನ್ನು ವಶಪಡಿಸಿಕೊಂಡದ್ದಲ್ಲದೆ ಅದನ್ನು ಸಂಪುರ್ಣವಾಗಿ ಲೂಟಿಮಾಡಿದ. ಯುರೋಪಿನಿಂದ ಭಾರತಕ್ಕೆ ಸಮುದ್ರಮಾರ್ಗವನ್ನು ಕಂಡು ಹಿಡಿದಾಗ ಸ್ವಲ್ಪ ಕಾಲ ಇದರ ಪ್ರಾಮುಖ್ಯ ತಗ್ಗಿತ್ತಾದರೂ ಫ್ರೆಂಚರು ಈಜಿಪ್ಟನ್ನು ಆಕ್ರಮಿಸಿಕೊಂಡಾಗ (1798) ಬ್ರಿಟಿಷ್ ಸೇನೆಯೊಂದು ಇದನ್ನು ವಶಪಡಿಸಿಕೊಂಡಿತ್ತು. ಕೆಂಪುಸಮುದ್ರದಲ್ಲಿ ಬ್ರಿಟಿಷರು ಪ್ರಬಲರಾದಾಗ ಏಡನಿನ ಮೇಲೆ ಅವರ ಕಣ್ಣು ಬಿತ್ತು. ಲಹೇಜಿನ ಸುಲ್ತಾನನೊಂದಿಗೆ ಇದಕ್ಕಾಗಿ ಸಂಧಾನ ನಡಸುತ್ತಿದ್ದಾಗ ಅಷ್ಟರಲ್ಲೇ ಆತ ಭಾರತದ ಹಡಗೊಂದನ್ನು ಕೊಳ್ಳೆಹೊಡೆದನೆಂಬ ಕಾರಣದಿಂದ ಈಸ್ಟ್‌ ಇಂಡಿಯ ಕಂಪನಿ ಈ ಪ್ರದೇಶವನ್ನು 1839ರಲ್ಲಿ ವಶಪಡಿಸಿಕೊಂಡು ಭಾರತದ ಆಡಳಿತಕ್ಕೆ ಸೇರಿಸಿಕೊಂಡಿತು. ಆ ಸುಲ್ತಾನ ಬ್ರಿಟಿಷರೊಂದಿಗೆ ಸ್ನೇಹದ ಒಪ್ಪಂದ ಮಾಡಿಕೊಂಡ. ಆಮೇಲೆ ಸುತ್ತಮುತ್ತಣ ಪ್ರದೇಶಗಳು ಒಂದೊಂದಾಗಿ ಬ್ರಿಟಿಷರ ಅಧೀನಕ್ಕೆ ಬಂದುವು. ಒಳನಾಡಿನ ಜನ ಆಗಿಂದಾಗ್ಗೆ ದಂಗೆಯೇಳುತ್ತಿದ್ದರು. ಇವರ ಮೇಲೆ ಸುಲ್ತಾನನ ಹತೋಟಿಯಿರಲಿಲ್ಲ. 1888ರ ವೇಳೆಗೆ ಇವರೆಲ್ಲ ತಣ್ಣಗಾದರು. ಒಂದನೆಯ ಮಹಾಯುದ್ಧದ ಕಾಲದಲ್ಲಿ ತುರ್ಕಿಯ ಸೇನೆ ಸುಲ್ತಾನನ ಪ್ರದೇಶವನ್ನಾಕ್ರಮಿಸಿಕೊಂಡಿತ್ತು. ಯುದ್ಧ ಅಂತ್ಯವಾದಾಗ ಲಹೇಜ್ ಸುಲ್ತಾನ ಮತ್ತೆ ಬಂದು ಕೂತ.

ಕೆಲಕಾಲದ ವರೆಗೆ ಏಡನ್ ಅಂದಿನ ಮುಂಬಯಿ ಸರ್ಕಾರದ ಅಧೀನದಲ್ಲಿದ್ದು 1932ರಿಂದ 1937ರವರೆಗೆ ಅಂದಿನ ಭಾರತ (ಬ್ರಿಟಿಷ್) ಸರ್ಕಾರದ ವಶಕ್ಕೆ ಬಂತು. 1937ರಲ್ಲಿ ಇದು ಬ್ರಿಟಿಷರ ನೇರವಾದ ವಸಾಹತಾಯಿತು. ವಿಧಾನಪರಿಷತ್ತು ಸ್ಥಾಪಿತವಾದ್ದು 1947ರಲ್ಲಿ. ಇದಕ್ಕೆ ಚುನಾವಣೆಯ ವ್ಯವಸ್ಥೆ ಜಾರಿಗೆ ಬಂದದ್ದು 1955ರಲ್ಲಿ. 1959ರಲ್ಲಿ ಜಾರಿಗೆ ಬಂದ ಸಂವಿಧಾನದ ಪ್ರಕಾರ ಬಹುಮತಾಧಿಕಾರದ ತತ್ತ್ವದ ಮೇಲೆ 1961ರಲ್ಲಿ ಮಂತ್ರಿವ್ಯವಸ್ಥೆ ಜಾರಿಗೆ ಬಂತು. 

1963ರಲ್ಲಿ ಇದು ದಕ್ಷಿಣ ಅರೇಬಿಯ ಸಂಯುಕ್ತ ರಾಷ್ಟ್ರದ ಸದಸ್ಯರಾಜ್ಯವಾಯಿ ತಾದರೂ ಇದರ ಮೇಲೆ ಬ್ರಿಟಿಷ್ ಅಧಿಕಾರ ಹೋಗಲಿಲ್ಲ.
ಈ ಪ್ರದೇಶದ ಜನ ಸಂಪುರ್ಣ ಸ್ವಾತಂತ್ರ್ಯಕ್ಕೆ ಹಾತೊರೆಯುತ್ತಿದ್ದದ್ದರಿಂದ 1964ರ ಒಪ್ಪಂದವೊಂದರ ಪ್ರಕಾರ ದಕ್ಷಿಣ ಅರೇಬಿಯ ಸಂಯುಕ್ತ ರಾಷ್ಟ್ರಕ್ಕೆ 1968ರೊಳಗೆ ಸ್ವಾತಂತ್ರ್ಯ ನೀಡುವುದಾಗಿಯೂ ಬ್ರಿಟಿಷ್ ಪಡೆಗಳನ್ನು ಹಿಂತೆಗೆದುಕೊಳ್ಳಲಾಗುವುದೆಂದೂ ಬ್ರಿಟಿಷರು  ಸಾರಿದರು. ಆದರೆ ಆ ಕಾಲದಲ್ಲಿ ಬಂಡಾಯಗಾರ ಚಳವಳಿ ನಿಲ್ಲಲಿಲ್ಲ. ಇವರಿಗೆ ಅರಬರ ಪ್ರೋತ್ಸಾಹವೂ ಇತ್ತು. 1965ರಲ್ಲಿ ಏಡನ್ ರಾಜ್ಯದ ಸಂವಿಧಾನವನ್ನು ರದ್ದುಮಾಡಿ ಅದರ ಮೇಲೆ ಹೈಕಮಿಷನರನಿಗೆ ಸಂಪುರ್ಣ ಅಧಿಕಾರ ನೀಡಲಾಯಿತು.
1967ರ ಹೊತ್ತಿಗೆ ಪರಿಸ್ಥಿತಿ ವಿಷಮಿಸಿ ಬ್ರಿಟಿಷ್ ಸೇನೆಯ ವಿರುದ್ಧ ಅನೇಕ ಹಿಂಸಾತ್ಮಕ ಪ್ರದರ್ಶಗಳು ನಡೆದುವು. ರಾಷ್ಟ್ರೀಯ ವಿಮೋಚನಾರಂಗ ಹಾಗೂ ದಕ್ಷಿಣ ಯೆಮನ್ ವಿಮೋಚನಾರಂಗ (ಫ್ಲಾಸಿ)-ಈ ಎರಡು ಪಕ್ಷಗಳು ಪ್ರಬಲವಾಗಿ ಅಧಿಕಾರಕ್ಕಾಗಿ ಸ್ಪರ್ಧಿಸತೊಡಗಿದವು. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತೆನ್ನಬಹುದು. 1967ರಲ್ಲಿ ಇಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸುವ ಸಲುವಾಗಿ ವಿಶ್ವಸಂಸ್ಥೆಯ ನಿಯೋಗವೊಂದು ಇಲ್ಲಿಗೆ ಬಂದಾಗ ನಡೆದ ಸಾಮೂಹಿಕ ಚಳವಳಿಗಳೂ ಹಿಂಸಾತ್ಮಕ ಗಲಭೆಗಳೂ ಹಿಂದೆಂದೂ ನಡೆಯದಷ್ಟು ಭೀಕರವಾಗಿದ್ದುವು. 
ಕೊನೆಗೂ 1967ರ ನವೆಂಬರಿನಲ್ಲಿ ಬ್ರಿಟಿಷ್ ಸೇನೆ ಇಲ್ಲಿಂದ ಕಾಲ್ತೆಗೆಯಿತು. ಏಡನ್ ಒಳಗೊಂಡ ದಕ್ಷಿಣ ಯೆಮನ್ ಸ್ವತಂತ್ರ ರಾಷ್ಟ್ರದ ಉದಯವಾದ್ದು ಆ ತಿಂಗಳ 26ರಂದು.                  (ಸಿ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ